ಶುಭವಾಗುತೈತಮ್ಮೋ.. Shabhavaguthai thammo (Kannada)

Dr. Dodda Rangegowda

Digital

Available

ಪ್ರಕಾಶಕರ ಮಾತು


ಡಾ. ಕನ್ನಡ ಚಿತ್ರರಂಗದ ಸಾಹಿತ್ಯ ಅನೇಕ ಕವಿಗಳಿಂದ ಶ್ರೀಮಂತವಾಗಿದೆ. ಕವಿಗೀತೆಗಳು ಕನ್ನಡ ಚಿತ್ರಗಳ ಮೌಲ್ಯವನ್ನು ಹೆಚ್ಚಿಸಿವೆ. ಎಪ್ಪತ್ತರ ದಶಕದಲ್ಲಿ ಕನ್ನಡ ಚಿತ್ರರಂಗ ಪ್ರವೇಶಿಸಿದ ಜಾನಪದೀಯ ಸೊಗಡಿನ ಜನಪ್ರಿಯ ಕವಿ ದೊಡ್ಡರಂಗೇಗೌಡರು ತಮ್ಮ ಗೀತೆಗಳ ಮೂಲಕ ಚಿತ್ರ ಸಾಹಿತ್ಯದ ಘನತೆಯನ್ನು ಹೆಚ್ಚಿಸಿದರು ಹಾಗೂ ಕಲಾತ್ಮಕತೆಗೂ ಕಾರಣರಾದರು. ಈ ಮಣ್ಣಿನ ಕಂಪಿನ ಅವರ ನುಡಿಗಟ್ಟುಗಳಿಂದ ಜನಮನ ಸೆಳೆದ ಡಾ. ದೊಡ್ಡರಂಗೇಗೌಡರು ತಮ್ಮ ಗೀತೆಗಳ ಮೂಲಕ ದಾಖಲೆ ಸೃಷ್ಟಿಸಿದ್ದು ಈಗ ಇತಿಹಾಸ. ಆ ಇಲ್ಲಿ ಸಿನಿಮಾ ಹಾಡುಗಳು ಮಾತ್ರವಲ್ಲ. ಹಾಡುಗಳ ಹಿಂದಿನ ಸ್ವಾರಸ್ಯಕರವಾದ ಕತೆಗಳೂ ಇವೆ. ಸ್ವತಃ ಸಿನಿಮಾಸಕ್ತನಾದ ನನಗೆ ಹಾಡುಗಳಿಗಿಂತ ಎಂದಿಗೂ ಆ ಹಾಡುಗಳ ಹಿಂದಿರಬಹುದಾದ ಸ್ವಾರಸ್ಯಕರವಾದ ಕತೆಗಳೇ ಹೆಚ್ಚು ಆಸಕ್ತಿ ಹುಟ್ಟಿಸುವಂತದ್ದು. ಕನ್ನಡದ ಸಂಗೀತ ನಿರ್ದೆಶಕರೊಂದಿಗೆ, ಚಿತ್ರ ನಿರ್ದೆಶಕರೊಂದಿಗೆ, ಗಾಯಕರೊಂದಿಗೆ ಗೀತರಚನೆಕಾರರಾದ ಡಾ. ದೊಡ್ಡರಂಗೇಗೌಡರ ಅನುಭವ, ಅನಿಸಿಕೆಗಳು ವಿಶಿಷ್ಟವಾದದ್ದು. ಓದುಗರಿಗೂ ಸಹ ಡಾ. ದೊಡ್ಡರಂಗೇಗೌಡರ ಹಾಡುಗಳು ಮತ್ತು ಹಾಡುಗಳ ಹಿಂದಿನ ಕತೆ ಖುಷಿ ನೀಡುತ್ತದೆ ಎಂದು ಭಾವಿಸಿರುತ್ತೇನೆ. ನಿಮ್ಮ ಅಭಿಪ್ರಾಯಕ್ಕೆ, ಸಲಹೆಗಳಿಗೆ ಸದಾ ಸ್ವಾಗತ.
ವಿ. ಲಕ್ಷಿ ಕಾಂತ್
ಪ್ರಕಾಶಕರು
ಟೋಟಲ್ ಕನ್ನಡ

ಸಿನಿಮಾದಲ್ಲಿ ಹಾಡು ಮೂಡುವುದು ಹೇಗೆ?


ಈಗಿನ ಸಮೂಹ ಮಾಧ್ಯಮಗಳಲ್ಲಿ ಸಿನಿಮಾ ಅತ್ಯಂತ ಪ್ರಬಲವಾದ ಹಾಗೂ ಸಮರ್ಥವಾದ ಸಂವಹನ ಮಾಧ್ಯಮವಾಗಿದೆ. ಈ ಮಾತಿಗೆ ಕಾರಣಗಳಿವೆ. ಸಿನಿಮಾ ತನ್ನಷ್ಟಕ್ಕೆ ತಾನೇ ಒಂದು ಪ್ರತ್ಯೇಕ ಜಗತ್ತು.
ಸಿನಿಮಾದಲ್ಲಿ ಏನಿದೆ ಎಂಬುದಕ್ಕಿನ್ನ ಏನಿಲ್ಲ ಎಂದು ಹೇಳುವುದು ಸುಲಭವಾದೀತೇನೋ? ಆದರೂ, ಸಿನಿಮಾದಲ್ಲಿ ಬರುವ ಹಾಡುಗಳ ಪುಸ್ತಕ ಇದಾಗಿರುವುದರಿಂದ ಕೆಲವು ಮಾತು ಅನಿವಾರ್ಯ.
ಸಿನಿಮಾದಲ್ಲಿ ಭ್ರಮೆಗಳಿವೆ; ಕನಸುಗಳಿವೆ: ಮಹತ್ವಾಕಾಂಕ್ಷೆಗಳಿವೆ; ಅಷ್ಟೇ ಅಲ್ಲ ಗೋಲ್ ಮಾಲ್‌ಗಳಿವೆ; ಕಣ್ಣುಗಳಿವೆ; ಕಾಣದ ಕಲ್ಪನೆಗಳೂ ಕಂಡ ಆಳುಗಳೂ, ಹಿರಿತನಗಳೂ, ಕುರಿತನಗಳೂ, ಸಿರಿತನಗಳೂ, ಕಿರಿಕಿರಿಗಳೂ, ಅರೆಕೊರೆಗಳು, ಇಲ್ಲದಿಲ್ಲ.
ಬದುಕಿನ ಒಳಮಗ್ಗಅಂದ ಹಿಡಿದು ಹೊರ ಮಗ್ಗಲ ತನಕ ರೂಕ್ಷ ಸತ್ಯಗಳಿಂದ ಹಿಡಿದು ಕಟ್ಟುಕಥೆಗಳ ತನಕ, ಭೋಧನೆಗಳಿಂದ ಶುರುವಾಗಿ ಹಿಂಸೆಗಳ ತನಕ, ಸಿನಿಮಾ ಜಗತ್ತು ತನಗೆ ತಾನೇ ನಿಗೂಢವಾಗಿ ಸಾಧ್ಯತೆಗಳ ಆಧಾರವಾಗಿ ಸೃಜನಶೀಲರಿಗೆ ಸವಾಲಾಗಿ ಮೋಸ ಮಾಡುವವರಿಗೆ ಸಮೃದ್ಧ ವರದಾನವಾಗಿ, ಪ್ರೇಕ್ಷಕರ ಅಪೂರ್ವ ಮರೀಚಿಕೆಯಾಗಿ ಇರುವುದರಿಂದಲೇ ಅನಕ್ಷರಸ್ಥನಿಂದ ಮೊದಲುಗೊಂಡು ಅಕ್ಷರಸ್ಥನ ತನಕ ಕುತೂಹಲಕಾರಿಯಾಗಿಯೇ ಉಳಿದಿದೆ: ಬೆಳೆದಿದೆ. ಸಂಸ್ಕೃತಿಯ ಉತ್ಥಾನವೂ, ಅವಸಾನವೂ, ಹೊಸದರ ಆಹ್ವಾನವೂ ಇಲ್ಲಿರುವುದರಿಂದ ಎಲ್ಲರಿಗೂ ಬೆರಗಿನ ಪ್ರಪಂಚವಾಗಿ ಕಾಣುತ್ತಲೇ ಇದೆ. ಬಣ್ಣ ಬಣ್ಣದ ಕಥೆಗಳನ್ನು ಜೀವನ ವಿಧಾನಗಳನ್ನು ಉಣಬಡಿಸುತ್ತದೆ.
ನಾನು ವಿದ್ಯಾರ್ಥಿಯಾಗಿದ್ದಾಗ ಚಿಕ್ಕಂದಿನಲ್ಲಿ ಸಿನಿಮಾ ನೋಡಿ ಬಹಳ ಬಹಳ ಖುಷಿಪಟ್ಟಿದ್ದೆ. ಈಗ ಅಷ್ಟು ಖುಷಿಪಡಲು ಸಾಧ್ಯವಾಗಿಲ್ಲವಾದರೂ ಇಂದಿಗೂ ಚೋದ್ಯವಾದ ಸಿನಿಮಾ ನನ್ನಂತಹ ಭಾವುಕ ರಸಿಕರನೇಕರಿಗೆ ಅಮಲು ತರುವ ಮದ್ಯವಾಗಿದೆ. ಮಧ್ಯಮವರ್ಗದವರ ಕೆಳಮಧ್ಯಮವರ್ಗದವರ ಪಾಲಿಗೆ ದುಡ್ಡಿದ್ದಾಗ ನೋಡಿ ತಣಿಯುವ ಕ್ಷಣಿಕ ಸಂತಸದ ಭಾಗ್ಯನಿಧಿಯಾಗಿದೆ.
ಇಂಥಾ ಸಿನಿಮಾ ಜಗತ್ತಿಗೆ ನಾನು ಕಾಲಿಟ್ಟಿದ್ದು ಅತ್ಯಂತ ಆಶ್ಚರ್ಯಕರವಾಗಿದೆ. ಬಹುಶಃ ನಾನು ಪದ್ಯ ಬರೆಯುವ ವ್ಯಕ್ತಿ ಆಗಿಲ್ಲದಿದ್ದರೆ, ನನ್ನಂಥವನಿಗೆ ಇದು ಸಾಧ್ಯ ವಾಗುತ್ತಿರಲಿಲ್ಲವೇನೋ! ಅಂತೂ ಹಾಡು ಬರೆಯುವ ಹುಡುಗನಾಗಿ ಈ ಸಿನಿಮಾ ಪ್ರಪಂಚಕ್ಕೆ ಪಾದಾರ್ಪಣೆ ಮಾಡಿ ಮೂವತ್ನಾಲ್ಕು ವರ್ಷಗಳ ಯಶಸ್ವಿ ಹವ್ಯಾಸ (ವೃತ್ತಿ?)ದಲ್ಲಿ ನಿತ್ಯ ನಿತ್ಯ ಹೊಸ ಹೊಸ ಪ್ರಮೇಯಗಳನ್ನು ಸಾಧಿಸುತ್ತಾ ಬಂದು ಇಂದು ನನ್ನ ಅನುಭವಗಳ ಕುರುಹುಗಳೇನೋ ಎಂಬಂತೆ ಈ ಹಾಡಿನ ಪುಸ್ತಕವನ್ನು ಸಂಯೋಜಿಸಿ ಓದುಗರ ಕೈಗಿಡುತ್ತಿದ್ದೇನೆ.
1950-60ರ ಕಾಲಕ್ಕೆ ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಸುಪ್ರಸಿದ್ಧ ಕವಿಗಳು ಬರೆದು ಸಂಕಲನಗೊಂಡ ಕೃತಿಗಳಿಂದ ಆಯ್ದುಕೊಂಡ ಕವಿತೆಗಳಿಗೆ ರಾಗ ಸಂಯೋಜನೆ ಮಾಡಿಸಿ, ಸೂಕ್ತವಾಗಿ ಅಳವಡಿಸಿಕೊಳ್ಳುವ ಪದ್ಧತಿ ಇತ್ತು. ನಾನು ಸಿನಿಮಾಗಳಿಗೆ ಹಾಡು ಬರೆಯಲು ಆರಂಭಿಸಿದ ಕಾಲಕ್ಕೆ (1977) ಸಾಹಿತ್ಯಕ್ಕಿಂತ ಸಂಗೀತ ಬಹಳ ಮುಖ್ಯವಾಗಿ ಸಂಗೀತ ನಿರ್ದೇಶಕರು ಕೊಡುವ ಟ್ಯೂನ್ ಗಳಿಗೆ ಗೀತ ರಚನೆಕಾರರು ಮಾತು ಕೂಡಿಸುವ “ತಿರುಗ ಮುರುಗ” ಪದ್ಧತಿ ಚಾಲ್ತಿಯಲ್ಲಿತ್ತು. ಹೀಗಾಗಿ 'ಇದು ಮೊದಲು ಅಭಾಸ' ಅಂದುಕೊಂಡರೂ ಈಗ ಒಗ್ಗಿಕೊಂಡಿದ್ದೇನೆ. ಆಧುನಿಕ ಯಂತ್ರಗಳ ಹಾಗೆ ಹಾಡು ಹೆಣೆಯುವ ಕಾಯಕಕ್ಕೆ ಬಹಳಷ್ಟು ರೀತಿಯಲ್ಲಿ ನನ್ನನ್ನು ಸಂಪೂರ್ಣವಾಗಿ ಸಮರ್ಥಿಸಿಕೊಂಡಿದ್ದೇನೆ.
ಹಾಡು ಬರೆಯುವವನಿಗೆ 'ಮೂಡ್ ಇರಲಿ ಇಲ್ಲದಿರಲಿ ಹಾರ್ಮೋನಿಯಂ ಮುಂದೆ ಕೂತಾಗ 'ಕಂಪೋಸಿಂಗ್ ಕಾರ್ಯ'ದಲ್ಲಿ ಅನಿವಾರ್ಯವಾಗಿ ಪಾಲ್ಗೊಳ್ಳಬೇಕಾಗುತ್ತದೆ. ಕೆಲವೊಮ್ಮೆ ರೆಕಾರ್ಡ್ ಆದ ಮೂಸಿಕ್ ಟ್ರ್ಯಾಕ್ ಕ್ಯಾಸೆಟ್ ಸಿ.ಡಿ.ಗಳನ್ನು ಕೇಳುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ. ಸಾಹಿತ್ಯ ರಚನೆ ಮಾಡಬೇಕಾಗುತ್ತದೆ. ಆದ್ದರಿಂದಲೇ ಸಿನಿಮಾದಲ್ಲಿ ದಿಢೀರ್ ಸಾಹಿತ್ಯ ನಿರ್ಮಾಣದ ಇಂಥ ವಿಪರ್ಯಾಸಗಳಿದ್ದರೂ ಬರೆಯುವವರ ಪ್ರತಿಭಾ ಜಾಯಮಾನದಿಂದಲೋ, ಸಂಗೀತದ ಮಾಧುರ್ಯದಿಂದಲೋ. ಹಾಡಿದವರ ಕಂಠಸಿರಿಯಿಂದಲೋ. ಸಿನಿಮಾದಲ್ಲಿನ ನಾಯಕ ನಾಯಕಿಯರ ಇಮೇಜ್ ಗಳ ಪ್ರಭಾವದಿಂದಲೋ ಅಥವಾ ಕಥೆಯ ಬೇರೆ ಬೇರೆ ಆಕರ್ಷಕ ಸಾಮಗ್ರಿಗಳಿಂದಲೋ, ಇಲ್ಲ ನಿರ್ಮಾಪಕನ ಅದೃಷ್ಟ ಬಲದಿಂದಲೋ, ಹಾಡುಗಳು ಜನಪ್ರಿಯವಾಗುವುದೂ ಉಂಟು.
ಹಿಬ್, ಸೂಪರ್ ಹಿಟ್ಸ್, ಹೊಸ ಜನಾಂಗದ ಕ್ರೇಜ್ ಆಗುವವರೆಗೆ ಈ ಹಾಡುಗಳು ಜನರ ನಾಲಿಗೆಯ ಮೇಲೆ ನರ್ತಿಸಿದ್ದೂ ಉಂಟು, ನಾನಂತೂ ಅಂಥಾ ಯಶಸ್ಸು "ಸಿನಿಮಾ ಟೆಕ್ನಿಷಿಯನ್ ಟೀಮ್ ವರ್ಕ್” (cinema technician team Work) ನಿಂದ ಬಂದುದು ಎಂದು ನಮ್ರವಾಗಿ ಒಪ್ಪಿಕೊಳ್ಳುವ ಪಂಥಕ್ಕೆ ಸೇರಿದವನು.
ಇದೆಲ್ಲಾ ಯಾಕೆ ಹೇಳ ಹೊರಟೆನೆಂದರೆ ಇಲ್ಲಿ ಸಂಕಲಿತವಾಗಿರುವ ಹಾಡುಗಳು ಅಷ್ಟೆಲ್ಲಾ ವಲಯಗಳನ್ನು ಹಾಯ್ದು ಬಂದಿವೆ ಎಂಬುದನ್ನು ನಮ್ರವಾಗಿ ಸೂಚಿಸಲು ಮಾತ್ರ. ಇಲ್ಲಿನ ಪ್ರತಿಯೊಂದು ಹಾಡು ನಿರ್ದಿಷ್ಟ ಟ್ಯೂನ್‌ಗೆಂದೇ ಬರೆದಿದ್ದು, ಇವು ಆ ದೃಷ್ಟಿಯಿಂದ “ಆಶು ರಚನೆಗಳು' ಕವಿತೆಗಳಾಗಿವೆಯೋ, ಇಲ್ಲವೋ ಸಹೃದಯರು ಓದಿ ಅಥವಾ ಕೇಳಿ ಹೇಳಬೇಕು.
ಕೆಲವೊಮ್ಮೆ ನನಗೆ ಆಶ್ಚರ್ಯವಾಗುವಷ್ಟರ ಮಟ್ಟಿಗೆ ಯಾವುದೋ ಶುಭಗಳಿಗೆಯಲ್ಲಿ ಈ ಹಾಡುಗಳು ಮೂಡಿ ನನ್ನ ಬದುಕಿನ ಸ್ಥಿತಿಗತಿಯನ್ನೇ ಬದಲಿಸುವಷ್ಟು ಪ್ರಮುಖ ಪ್ರವಾಹಿತ ಪಡೆದು ಕನ್ನಡ ನಾಡಿನ ಉದ್ದಗಲಕ್ಕೂ ದೇಶ ವಿದೇಶಗಳಲ್ಲೂ ಬೀಸುವ ಗಾಳಿಯಲ್ಲಿ ಪ್ರವಾಹಿತವಾಗಿ ಮಧುರ ದನಿಯಾಗಿ ಬೆರೆತು ಹೋಗಿವೆ.
ಇವು ಚಿತ್ರ ರಸಿಕರಿಗೆ, ಗೀತೆಗಳ ಕೇಳುಗರಿಗೆ, ವಾಚಕರಿಗೆ, ಒಂದೆಡೆ ಲಭ್ಯವಾಗಲಿ ಎಂದೇ ನಾನು ಬರೆದ ಹಾಡುಗಳಲ್ಲಿ ಕೆಲವನ್ನು ನಿಮ್ಮ ಸಹೃದಯ ಮಡಿಲಲ್ಲಿ ಇರಿಸಿದ್ದೇನೆ.
ಡಾ. ದೊಡ್ಡರಂಗೇಗೌಡ...

   
Language Kannada
ISBN-13 978-81-922269-6-5
No of pages 187
Font Size Medium
Book Publisher Total Kannada
Published Date 01 Jan 2019

About Author

Related Books