ಹಿಂದೂ ಧರ್ಮ ವಿಚಾರ HINDU DHARMA VICHARA (Kannada)

Suryambailu Krishnamoorthi

Digital

Available

ಮೊದಲ ಮಾತು


ಧರ್ಮಶಾಸ್ತ್ರಗಳ ಬಗ್ಗೆ ನನಗೆ ಯಾವ ಪಾಂಡಿತ್ಯವಾಗಲಿ ಹೆಚ್ಚಿನ ತಿಳಿವಳಿಕೆಯಾಗಲಿ ಇಲ್ಲ. ಧಾರ್ಮಿಕ ನಂಬಿಕೆಗಳ ಬಗ್ಗೆ ಹಾಗೂ ಗತಾನುಗತ ಧರ್ಮಾಚರಣೆಗಳ ಬಗ್ಗೆ ಚಿಕ್ಕಂದಿನಿಂದಲೂ ಸಂದೇಹದ ದೃಷ್ಟಿಕೋನವಿಟ್ಟುಕೊಂಡು ಬೆಳೆದ ವ್ಯಕ್ತಿ ನಾನು. ಹಾಗಾಗಿ ಇದನ್ನು ಶಾಸ್ತ್ರಗಳ ಬಗ್ಗೆ ಲೇಖನವೆನ್ನುವುದಕ್ಕಿಂತ ಜೀವನದಿಂದ ನಾನೇನು ಕಲಿತೆ ಎಂಬುದರ ನಿರೂಪಣೆಯೆನ್ನುವುದು ಹೆಚ್ಚು ಸೂಕ್ತ. ಲೇಖನ ಬರೆಯಲು ಬೇಕಾದ ಭಾಷಾ ಪರಿಣತಿಯೂ ನನಗಿಲ್ಲ.
ಈ ಬರಹಕ್ಕೆ ಪ್ರೋತ್ಸಾಹ ಮೊದಲಿನದಾಗಿ ನನ್ನ ಜೀವನ ಸಂಗಾತಿಯಾಗಿ ಬಂದ ಲಲಿತ. ನಾನು ಸಮಾಜದ ಕೆಲವೊಂದು ರೀತಿ ನೀತಿಗಳನ್ನು, ಆಚಾರಗಳನ್ನು ಟೀಕಿಸಿ ಮಾತನಾಡುವುದು ಹೇಗೆ ನಕಾರಾತ್ಮಕ ದೃಷ್ಟಿಕೋನವೆಂಬುದನ್ನು ನನಗೆ ಮನವರಿಕೆ ಮಾಡಿಕೊಟ್ಟವಳು ಅವಳು. 'ನಿಮ್ಮ ವಿಚಾರಗಳಲ್ಲಿ ಸತ್ಯತೆ ಇದ್ದರೂ ಅದನ್ನು ಮಾತಿನಲ್ಲಿ ವಿಶದಪಡಿಸುವ ರೀತಿ ಇತರರ ಮನಸ್ಸಿಗೆ ನೋವನ್ನು ಕೊಡಬಲ್ಲುದು. ಅಲ್ಲದೆ ಯಾವ ವಿಷಯವೇ ಆಗಲಿ ಅದನ್ನು ವಿವಿಧ ದೃಷ್ಟಿಕೋನಗಳಿಂದ ನೋಡಬಹುದು ತಾನೇ? ತನ್ನದೇ ದೃಷ್ಟಿಕೋನ ಸರಿಯೆಂದು ಯಾರೂ ಹೇಳುವಂತಿಲ್ಲ. ಟೀಕೆ, ಟಿಪ್ಪಣಿ ಮಾಡುವ ಬದಲು ನಿಮ್ಮ ವಿಚಾರಗಳನ್ನು ಒಂದೆಡೆ ಸಂಗ್ರಹಿಸಿ ಬರೆದರೆ ಆಗ ವಿಚಾರವೂ ಪರಿಪಕ್ವವಾಗುತ್ತದೆ; ಮಾತಿನ ಕಟುತ್ವವೂ ಇಲ್ಲದಾಗುತ್ತದೆ' ಎಂದು ಬರೆಯಲು ಪ್ರೋತ್ಸಾಹಿಸಿ ಸಹಾಯ ಮಾಡಿದವಳು ನನ್ನ ದಿವಂಗತ ಪತ್ನಿ. Rectum Cancer ರೋಗ ಪೀಡಿತಳಾಗಿ ಶಸ್ತ್ರ ಚಿಕಿತ್ಸೆ, ಕಿಮೋ, ರೇಡಿಯೇಶನ್ ಇತ್ಯಾದಿ ಚಿಕಿತ್ಸೆಗಳ ಮಧ್ಯೆಯೂ ಜೀವನೋತ್ಸಾಹ ಇಟ್ಟುಕೊಂಡು, ತನ್ನ ಅದೃಷ್ಟದ ಬಗ್ಗೆ ಒಂದಿಷ್ಟೂ ಗೊಣಗಾಡದೆ, ಜೀವನದಲ್ಲಿ ಬಂದುದನ್ನು ಬಂದಂತೆ ಸ್ವೀಕರಿಸುವ ಮನೋಭಾವವಿಟ್ಟುಕೊಂಡು ಮನಸ್ಸಿನ ಸ್ಥಿರತೆಯನ್ನು ಕಾಪಾಡಿಕೊಂಡು ಸ್ಥಿತಪ್ರಜ್ಞತೆಯ ಜೀವನವೆಂದರೆ ಏನೆಂಬುದನ್ನು ನನಗೆ ಮಾರ್ಗದರ್ಶನ ಮಾಡಿ ತೋರಿಸಿದವಳು ಅವಳು.
ಧರ್ಮ ಶಾಸ್ತ್ರಗಳನ್ನು ಅರ್ಥಮಾಡುವ ಪ್ರಯತ್ನವನ್ನು ಈ ಮಧ್ಯೆ ಜೊತೆಯಾಗಿ ನಾವಿಬ್ಬರೂ ಈ ಮೊದಲೇ ಆರಂಭಿಸಿದ್ದೆವು. ಶಾಸ್ತ್ರಗಳಲ್ಲಿ ವಿಶದಪಡಿಸಿದ ತತ್ತ್ವಗಳನ್ನು ನಮ್ಮ ಸ್ವಂತ ಜೀವನದ ಅನುಭವದ ಒರೆಗಲ್ಲಿನ ಸಹಾಯದಿಂದ ವಿಮರ್ಶಾತ್ಮಕ ದೃಷ್ಟಿಕೋನದಿಂದ ನೋಡುವ ಹವ್ಯಾಸ ನಮಗೆ ಜೀವನದ ಕಠಿಣ ಪರಿಸ್ಥಿತಿಯನ್ನು ಎದುರಿಸಲು ಸಹಾಯಕವಾಯಿತು.
33 ವರ್ಷಗಳ ಕಾಲ ಜೀವನ ಸಂಗಾತಿಯಾಗಿದ್ದ ಲಲಿತ 2005ರಲ್ಲಿ ಅಗಲಿದ ಎರಡು ವರ್ಷಗಳೊಳಗೆ ನಾನೂ ಕೂಡಾ Lymphoma Cancer ಪೀಡಿತನಾದೆ. ಸಾವಿಗೆ ನಾನು ಹೆದರುವುದಿಲ್ಲ; ವೃಥಾ ಚಿಕಿತ್ಸೆಯ ಯಾತನೆಯೂ ಯಾಕೆ? ಎಂದು ಚಿಕಿತ್ಸೆ ಪಡೆಯಲು ನಾನು ಹಿಂದೇಟು ಹಾಕುತ್ತಿದ್ದಾಗ, 'ಚಿಕಿತ್ಸೆಯನ್ನು ನಿರಾಕರಿಸುವುದು ಸೋಲಿನ ಮನೋಭಾವ, ಸಾವಿಗೆ ಹೆದರದವನಿಗೆ ನೋವಿನ ಹೆದರಿಕೆ ಯಾಕೆ? ಅದು ಪಲಾಯನವಾದ, ಧೀರತನವಲ್ಲವೆಂದು ನನ್ನ ನಿರ್ಧಾರವನ್ನು ಪ್ರಶ್ನಿಸಿ ನನಗೆ ಅರ್ಜುನನ ವಿಷಾದಯೋಗದ ನೆನಪು ಹುಟ್ಟಿಸಿದವರು, ನನ್ನಿಂದ ಕಿರಿಯರಾದ ನನ್ನ ಆಪ್ತ ಬಂಧುಗಳು, ಕೂಡಲೇ ಹೆಚ್ಚು ವಿಳಂಬ ಮಾಡದೆ ಚಿಕಿತ್ಸೆಗಾಗಿ ನಾನು ಆಸ್ಪತ್ರೆಗೆ ದಾಖಲಾದೆ.
2011ರಲ್ಲಿ ತೀವ್ರ ಖಾಯಿಲೆಗೊಳಗಾಗಿ ಪುನಃ ನಾನು ಆಸ್ಪತ್ರೆ ಸೇರಬೇಕಾಗಿ ಬಂತು. ಖಾಯಿಲೆಯ ತೀವ್ರತೆಯಿಂದಲೋ ಏನೋ ಜೀವನ ಮುಂದುವರಿಸುವ ಉತ್ಸಾಹ, ಛಲ ನನ್ನಲ್ಲಿ ಇಳಿಮುಖವಾಗತೊಡಗಿತು. ಮೇಲಿಂದ ಮೇಲೆ ಮಾನ್ಯ ಡಿ.ವಿ.ಜಿ.ಯವರ ಕೆಳಗಿನ ಕವನ ಸಾಲುಗಳು ನನ್ನ ಮನಃ ಪಟಲದಲ್ಲಿ ಮೂಡತೊಡಗಿದವು:

   
Language Kannada
ISBN-13 9788192226972
No of pages 125
Font Size Medium
Book Publisher Total Kannada
Published Date 01 Jan 2019

About Author

Related Books